ಯೋಗ ದಿನಾಚರಣೆಗೆ ಅಣಿಯಾದ ಭಾರತ
ನಾಲ್ಕನೇ ’ಅಂತರರಾಷ್ಟ್ರೀಯ ಯೋಗ ದಿನ’ ಆಚರಣೆಗಾಗಿ ಸಿದ್ಧತೆ ಚುರುಕಿನಿಂದ ನಡೆದಿದ್ದು, ಡೆಹ್ರಾಡೂನ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 55 ಸಾವಿರ ಯೋಗ ಆಸಕ್ತರು ಗುರುವಾರ ಆಸನಗಳನ್ನು ಪ್ರದರ್ಶಿಸಲಿದ್ದಾರೆ.
ಯೋಗ ದಿನದ ಅಂಗವಾಗಿ ದೇಶದಾದ್ಯಂತ ಸುಮಾರು 5 ಸಾವಿರ ಕಾರ್ಯಕ್ರಮಗಳು ಆಯೋಜನೆಯಾಗಿರುವುದಾಗಿ ಆಯುಷ್ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೊ ಪ್ರಕಟಿಸಿರುವ ಪ್ರಧಾನಿ ಮೋದಿ, ’ಯೋಗ ದೇಹವನ್ನು ದೃಢವಾಗಿಡಲು ಮಾಡುವ ವ್ಯಾಯಾಮ ಮಾತ್ರವಲ್ಲ. ಆರೋಗ್ಯದ ಭರವಸೆಯ ಪಾಸ್ಪೋರ್ಟ್ ಇದ್ದಂತೆ. ’ನಾನು’ ಎಂಬುದರಿಂದ ’ನಾವು’ ಕಡೆಗೆ ಸಾಗುವ ಮಾರ್ಗವೇ ಯೋಗ. ಮಾನಸಿಕ–ದೈಹಿಕ ಸಮತೋಲನ, ಅಪಾರ ಸಾಮರ್ಥ್ಯ, ಜೀವನೋತ್ಸಾಹ ಹೆಚ್ಚಿಸಲು ಸಹಕಾರಿಯಾಗಿದೆ. ಜಗತ್ತಿನ ಎಲ್ಲರೂ ‘ಯೋಗ’ ಜೀವನದ ಭಾಗವಾಗಿಸಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.
ದೇಶದ ಎಲ್ಲ ರಾಜ್ಯ, ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಎನ್ಜಿಒಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜನೆಯಾಗಿದೆ. ರಾಜಪಥ ಸೇರಿ ದೆಹಲಿಯ ಎಂಟು ಕಡೆ ಕಾರ್ಯಕ್ರಮ ನಡೆಯಲಿದೆ. ಕೆಂಪು ಕೋಟೆಯಲ್ಲಿ ಕೇಂದ್ರ ಶಸ್ತ್ರಾಸ್ತ್ರ ಪೊಲೀಸ್ ಪಡೆಯ ಬಿಎಸ್ಎಫ್, ಸಿಆರ್ಪಿಎಫ್, ಸಿಐಎಸ್ಎಫ್ನ ಒಟ್ಟು 50 ಸಾವಿರ ಯೋಗ ಆಸಕ್ತರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿರಿ : ಅಂತರಾಷ್ಟ್ರೀಯ ಯೋಗ ದಿನ : ಮೂಲ ಮತ್ತು ಪ್ರಾಮುಖ್ಯತೆ.
2014ರ ಡಿಸೆಂಬರ್ನಲ್ಲಿ ವಿಶ್ವಸಂಸ್ಥೆ ಜೂನ್ 21ರಂದು ಅಂತರರಾಷ್ಟ್ರೀಯ ಯೋಗ ದಿನವಾಗಿ ಘೋಷಿಸಿತು. ನಾಲ್ಕು ವರ್ಷಗಳಿಂದ 150ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಯೋಗ ದಿನ ಆಚರಿಸಲಾಗುತ್ತಿದೆ.
YOU MAY ALSO LIKE
No comments