ಐತಿಹಾಸಿಕ ಟೆಸ್ಟ್: ಟೀಂ ಇಂಡಿಯಾ ವಿರುದ್ಧ ಅಲ್ಪ ಮೊತ್ತಕ್ಕೆ ಕುಸಿದ ಆಫ್ಘಾನ್
ಶಿಖರ್ ಧವನ್, ಮುರುಳಿ ವಿಜಯ್ ಆಕರ್ಷಕ ಶತಕ ಹಾಗೂ ಕೆ.ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಸಮಯೋಚಿತ ಅರ್ಧಶತಕಗಳ ನೆರವಿನಿಂದ ಭಾರತ ಮೊದಲ ಇನಿಂಗ್ಸ್’ನಲ್ಲಿ 474 ರನ್ ಬಾರಿಸಿ ಆಲೌಟ್ ಆಗಿದೆ.
ಮೊದಲ ದಿನದಂತ್ಯಕ್ಕೆ 347 ರನ್’ಗಳಿಗೆ ಆರು ವಿಕೆಟ್ ಕಳೆದುಕೊಂಡಿದ್ದ ಭಾರತ ಎರಡನೇ ದಿನವೂ ಉತ್ತಮ ಬ್ಯಾಟಿಂಗ್ ನಡೆಸಿತು. ಅಶ್ವಿನ್ 18 ರನ್ ಬಾರಿಸಿ ಪೆವಿಲಿಯನ್ ಸೇರಿದರು. ಮೊದಲನೇ ದಿನದಾಟದಲ್ಲಿ 10 ರನ್ ಬಾರಿಸಿದ್ದ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ನಡೆಸಿದರು. ಪಾಂಡ್ಯಗೆ ಮತ್ತೋರ್ವ ಆಲ್ರೌಂಡರ್ ಜಡೇಜಾ ಉತ್ತಮ ಸಾಥ್ ನೀಡಿದರು. 8ನೇ ವಿಕೆಟ್’ಗೆ ಈ ಜೋಡಿ 67 ರನ್’ಗಳ ಜತೆಯಾವಾಡುವ ಮೂಲಕ ತಂಡವನ್ನು 400 ರನ್’ಗಳ ಗಡಿ ದಾಟಿಸಿದರು. ಜಡೇಜಾ 20 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಪಾಂಡ್ಯ 94 ಎಸೆತಗಳಲ್ಲಿ 71 ರನ್ ಬಾರಿಸಿ ವಫದಾರ್’ಗೆ ಎರಡನೇ ಬಲಿಯಾದರು. ಇನ್ನು ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಉಮೇಶ್ ಯಾದವ್ 26 ರನ್ ಸಿಡಿಸಿ ಅಜೇಯರಾಗುಳಿದರು. ಇಶಾಂತ್ ಶರ್ಮಾ’ರನ್ನು ಪೆವಿಲಿಯನ್’ಗೆ ಅಟ್ಟಿದ ರಶೀದ್ ಖಾನ್ ಭಾರತದ ಮೊದಲ ಇನಿಂಗ್ಸ್’ಗೆ ತೆರೆ ಎಳೆದರು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಆಫ್ಘಾನ್, ಟೀಂ ಇಂಡಿಯಾ ಮಾರಕ ದಾಳಿಗೆ ತತ್ತರಿಸಿ ಹೋಗಿದೆ. ಪಂದ್ಯದ 4ನೇ ಓವರ್'ನಲ್ಲಿ ಆರಂಭಿಕ ಮೊಹಮ್ಮದ್ ಶೆಹಜಾದ್ ಇಲ್ಲದ ರನ್ ಕದಿಯಲು ಹೋಗಿ ರನೌಟ್'ಗೆ ಬಲಿಯಾದರು. ಇದಾದ ಕೆಲಹೊತ್ತಿನಲ್ಲೇ ಜಾವೇದ್'ರನ್ನು ಇಶಾಂತ್ ಶರ್ಮಾ ಕ್ಲೀನ್ ಬೌಲ್ಡ್ ಮಾಡಿದರು. ರಹಮತ್ ಶಾ[14] ತಂಡಕ್ಕೆ ಅಲ್ಪ ಚೇತರಿಕೆ ನೀಡಲು ಪ್ರಯತ್ನಿಸಿದರಾದರೂ ಅವರನ್ನು ಉಮೇಶ್ ಯಾದವ್ ಹೆಚ್ಚು ಹೊತ್ತು ಕ್ರೀಸ್'ನಲ್ಲಿ ನೆಲೆಯೂರಲು ಬಿಡಲಿಲ್ಲ. ನಾಯಕ ಅಸ್ಗರ್ ಹಾಗೂ ಹಸ್ಮತುಲ್ಲಾ ಶಾಹಿದಿ ತಲಾ 11 ರನ್ ಬಾರಿಸಿ ಅಶ್ವಿನ್'ಗೆ ವಿಕೆಟ್ ಒಪ್ಪಿಸಿದರು. ಇನ್ನು ಕೆಳಕ್ರಮಾಂಕದಲ್ಲಿ ಆಲ್ರೌಂಡರ್ ಮೊಹಮ್ಮದ್ ನಬೀ ತಂಡಕ್ಕೆ ಅಲ್ಪ ಆಸರೆಯಾಗಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟ್ಸ್'ಮನ್'ಗಳು ಪ್ರತಿರೋದ ತೋರಲಿಲ್ಲ. ನಬೀ 24 ರನ್ ಬಾರಿಸಿದ್ದೇ ಆಫ್ಘಾನ್ ಪರ ಗರಿಷ್ಠ ವಯುಕ್ತಿಕ ಮೊತ್ತವೆನಿಸಿತು.
ಭಾರತ ಪರ ಆಶ್ವಿನ್ 4 ವಿಕೆಟ್ ಪಡೆದರೆ, ಜಡೇಜಾ ಹಾಗೂ ಇಶಾಂತ್ ಶರ್ಮಾ ತಲಾ 2 ಮತ್ತು ಉಮೇಶ್ ಯಾದವ್ 1 ವಿಕೆಟ್ ಪಡೆದರು.
YOU MAY ALSO LIKE
No comments